
ಮಾನ್ಯರೆ,
ನಿಮಗೆಲ್ಲರಿಗೂ ಟಿ.ಜಿ.ಶ್ರೀನಿಧಿಯವರಿಂದ ಒಂದು ಆತ್ಮೀಯ ಆಮಂತ್ರಣ.
ಯುವ ವಿಜ್ಞಾನ ಬರಹಗಾರ ಹಾಗೂ ಸಾಫ್ಟ್ವೇರ್ ತಂತ್ರಜ್ಞ ಟಿ.ಜಿ.ಶ್ರೀನಿಧಿಯವರ ಹೊಸ ಪುಸ್ತಕಗಳು -
'ವೆಬ್ ವಿಹಾರ' ಹಾಗೂ
'ಅವಕಾಶ ಅಪಾರ' - ಬರುವ
ಜುಲೈ ೨೦ ರಂದು ಸಂಜೆ ಬೆಂಗಳೂರು ಬಸವನಗುಡಿಯ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ ಬಿಡುಗಡೆಯಾಗಲಿವೆ.
ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನ ಬರಹಗಾರರಾದ ಶ್ರೀ ನಾಗೇಶ ಹೆಗಡೆ, ಟಿ ಆರ್ ಅನಂತರಾಮು, ಕೊಳ್ಳೇಗಾಲ ಶರ್ಮ ಹಾಗೂ 'ವಿಶ್ವಕನ್ನಡ ಡಾಟ್ ಕಾಂ'ನ ಡಾ.ಯು.ಬಿ.ಪವನಜ ಉಪಸ್ಥಿತರಿರಲಿದ್ದಾರೆ.
ಹವ್ಯಾಸಿ ವಿಜ್ಞಾನ ಬರಹಗಾರರಾದ ಟಿ.ಜಿ.ಶ್ರೀನಿಧಿಯವರ ಮುನ್ನೂರಕ್ಕೂ ಹೆಚ್ಚು ಲೇಖನಗಳು ಹಾಗೂ ಎರಡು ಪುಸ್ತಕಗಳು ಈಗಾಗಲೇ ಪ್ರಕಟವಾಗಿವೆ. ಅವರು 'ಇ-ಜ್ಞಾನ' ಎಂಬ ವಿಜ್ಞಾನಕ್ಕೆ ಸಂಬಂಧಪಟ್ಟ ಕನ್ನಡ ಬ್ಲಾಗನ್ನೂ ನಡೆಸುತ್ತಿದ್ದಾರೆ.
ಬಿಡುಗಡೆಯಾಗುತ್ತಿರುವ ಹೊಸ ಪುಸ್ತಕಗಳ ಪರಿಚಯ ಹೀಗಿದೆ:
೧. ವೆಬ್ ವಿಹಾರ - ಅಂತರಜಾಲ ಲೋಕಕ್ಕೊಂದು ಬೆಳಕಿಂಡಿಇದು ಅಂತರಜಾಲ (ಇಂಟರ್ ನೆಟ್) ಹಾಗೂ ವಿಶ್ವವ್ಯಾಪಿ ಜಾಲದ (WWW) ಸಂಕ್ಷಿಪ್ತ ಪರಿಚಯ ನೀಡಿ ಅದರ ಅನೇಕ ಸೌಲಭ್ಯಗಳನ್ನು ಬಳಸಲು ಓದುಗರಿಗೆ ನೆರವಾಗುವ ಪುಸ್ತಕ. ಮಾಹಿತಿ ಎಂದರೇನು ಎಂಬಲ್ಲಿಂದ ಪ್ರಾರಂಭಿಸಿ ಗಣಕ ಜಾಲಗಳು, ಅಂತರಜಾಲದ ಹುಟ್ಟು, ವಿಶ್ವವ್ಯಾಪಿ ಜಾಲ ಬೆಳೆದ ಬಗೆ, ಇಮೇಲ್, ಬ್ಲಾಗಿಂಗ್, ಇ-ಶಾಪಿಂಗ್, ಆನ್ಲೈನ್ ಬ್ಯಾಂಕಿಂಗ್,ಬ್ಲಾಗಿಂಗ್, ವಿಶ್ವವ್ಯಾಪಿ ಜಾಲವನ್ನು ಕಾಡುತ್ತಿರುವ ಸಮಸ್ಯೆಗಳು (ವೈರಸ್, ಫಿಷಿಂಗ್, ಮಾಲ್ವೇರ್, ಸ್ಪಾಮ್ ಇತ್ಯಾದಿ) ಮುಂತಾದ ಅನೇಕ ವಿಷಯಗಳನ್ನು ಇದು ವಿವರಿಸುತ್ತದೆ. ವಿಶ್ವವ್ಯಾಪಿ ಜಾಲದಲ್ಲಿ ಕನ್ನಡದ ಸ್ಥಿತಿಗತಿಗಳ ಬಗೆಗೂ ಬಹಳಷ್ಟು ಮಾಹಿತಿ ಇದೆ. ಅಂತರಜಾಲದಲ್ಲಿ ಕನ್ನಡದ ಬಳಕೆ ಬೆಳೆದುಬಂದ ಹಾದಿಯ ಹಿನ್ನೋಟದ ಜೊತೆಗೆ ಕನ್ನಡದ ಪ್ರಮುಖ ತಾಣಗಳ ಹಾಗೂ ಕುತೂಹಲಕರ ಬ್ಲಾಗುಗಳ ಪಟ್ಟಿ ಕೂಡ ಇದೆ. ಶ್ರೀ ನಾಗೇಶ ಹೆಗಡೆಯವರು ಮುನ್ನುಡಿ ಬರೆದಿದ್ದಾರೆ.
೨. ಅವಕಾಶ ಅಪಾರಇದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳ ಬಗೆಗಿನ ಅಂಕಣ ಬರಹಗಳ ಸಂಕಲನ. ಅನಿಮೇಷನ್, ಡೇಟಾವೇರ್ಹೌಸಿಂಗ್, ಮೇನ್ಫ್ರೇಮ್ಸ್, ಬಿಸಿನೆಸ್ ಇಂಟೆಲಿಜೆನ್ಸ್ ಮುಂತಾದ ಕ್ಷೇತ್ರಗಳ ಬಗೆಗಿನ ಮೂವತ್ತಾರು ಲೇಖನಗಳಿರುವ ಈ ಪುಸ್ತಕಕ್ಕೆ ಡಾ.ಯು.ಬಿ.ಪವನಜರ ಮುನ್ನುಡಿ ಇದೆ.
ಧನ್ಯವಾದಗಳು.
---ತಮ್ಮ ವಿಶ್ವಾಸಿ,
ಟಿ ಜಿ ಶ್ರೀನಿಧಿ
srimysore@gmail.com
*Click on image to read the invitation